ಟ್ಯಾಂಜಿಯರ್

ಜಿಬ್ರಾಲ್ಟರ್ ಜಲಸಂಧಿಯ ಪಶ್ಚಿಮ ತುದಿಯಲ್ಲಿರುವ ಮೊರಾಕೋಗೆ ಸೇರಿದ ಸರ್ವಋತು ಬಂದರು. ಜನಸಂಖ್ಯೆ 1,41,714 (1960). ಪೂರ್ವಕಾಲದಿಂದಲೂ ವ್ಯಾಪಾರಮಾರ್ಗದ ಕೇಂದ್ರವಾದ ಇದನ್ನು ಪಡೆಯಲು ಅನೇಕ ದೇಶಗಳು ಕಾದಾಡಿವೆ. ಮೊದಲು ರೋಮನರ ವಶದಲ್ಲಿದ್ದ ಇದು ಕ್ರಮವಾಗಿ ವ್ಯಾಂಡಲ್, ಬಿಜಾóಂಟೀನ್ ಮತ್ತು ಅರಬ್ ಜನರ ಕೈಗೆ ಹೋಯಿತು. ಅನಂತರ ಪೋರ್ಚುಗೀಸರ ವಶದಲ್ಲಿದ್ದ ಇದು 1662ರಲ್ಲಿ ಇಂಗ್ಲಿಷರ ವಶಕ್ಕೆ ಹೋಯಿತು. ಅವರು ಇದನ್ನು ಮೂರರಿಗೆ ಒಪ್ಪಿಸಿದರು (1684). ಇಂಗ್ಲೆಂಡ್, ಫ್ರಾನ್ಸ್ ಮತ್ತು ಸ್ಪೇನ್ ಇದನ್ನು ಅಂತರರಾಷ್ಟ್ರೀಯ ವಲಯವನ್ನಾಗಿ ಮಾಡಬೇಕೆಂದು ಸಮಾಲೋಚನೆ ನೆಡೆಸುತ್ತಿದ್ದಾಗ (1913) ಒಂದನೆಯ ಮಹಾಯುದ್ಧ ಪ್ರಾರಂಭವಾಗಿ ಆ ಯೋಚನೆ ಅಲ್ಲಿಗೆ ನಿಂತುಹೋಯಿತು. 1923ರಲ್ಲಿ ಈ ರಾಷ್ಟ್ರಗಳು ಇದಕ್ಕೆ ಹೊಸ ಸಂವಿಧಾನವನ್ನು ಜಾರಿಗೆ ತಂದುವು. ಇದು ಮಾರಾಕೋ ಸುಲ್ತಾನನ ಪ್ರಭುತ್ವಾಧಿಕಾರಕ್ಕೆ ಒಳಪಟ್ಟ ಶಾಶ್ವತ ಅಂತರರಾಷ್ಟ್ರೀಯ ತಟಸ್ಥವಲಯವಾಯಿತು. ಇದರ ಆಡಳಿತವನ್ನು ಒಬ್ಬ ಶ್ರೇಷ್ಠಾಧಿಕಾರಿಯೂ ಇಬ್ಬರು ಸಹಾಯಕ ಅಧಿಕಾರಿಗಳೂ ನಡೆಸುತ್ತಾರೆ. ಆಡಳಿತ ಮೇಲೆ ಶಾಸನಸಭೆಯ ಹತೋಟಿ ಇದೆ. ಶಾಸನಸಭೆಯಲ್ಲಿ 26 ವಿವಿಧ ಜನಾಂಗಗಳ ಪ್ರತಿನಿಧಿಗಳಿದ್ದಾರೆ. ಈ ಜನಾಂಗಗಳ ಅನುಕೂಲಕ್ಕಾಗಿ ಪ್ರತ್ಯೇಕ ನ್ಯಾಯಸ್ಥಾನಗಳಿವೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಇದನ್ನು ಸ್ಪೇನ್ ವಶಪಡಿಸಿಕೊಂಡಿತ್ತು 1945ರಲ್ಲಿ ಪುನಃ ಇದು ಅಂತರರಾಷ್ಟ್ರೀಯ ಆಡಳಿತಕ್ಕೆ ಒಳಪಟ್ಟಿತು. 1956ರಲ್ಲಿ ಇದು ಮೊರಾಕೋಗೆ ಸೇರಿಹೊಯಿತು. ಅಂತರರಾಷ್ಟ್ರೀಯ ವಲಯವಾಗಿ ಇದರ ಸ್ಥಾನ ಹೋದಮೇಲೆ ಟ್ಯಾಂಜಿಯಲ್ ಒಂದು ಸಾಮಾನ್ಯ ಬಂದರಾಗಿದೆ. ಈ ಬಂದರಿನ ಮೂಲಕ ಉತ್ತರ ಮೊರಾಕೋವಿನ ಕೃಷಿ ಉತ್ಪನ್ನಗಳನ್ನು ರಫ್ತುಮಾಡುತ್ತಿದ್ದಾರೆ. ಇಲ್ಲಿ ಸಾಬೂನು, ತಂಬಾಕು, ಜವಳಿ ಮುಂತಾದ ಉದ್ಯಮಗಳು ಬೆಳೆದಿವೆ. ಈಗ ಇದು ಮೊರಾಕೋವಿನ ಬೇಸಗೆಯ ರಾಜಧಾನಿಯಾಗಿದೆ.
(ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ